ಅಯೋವ
	ಈಗಿನ ಅಯೋವ, ಮಿನಿಸೋಟ ಹಾಗೂ ಡಕೋಟಗಳ ಭಾಗಗಳನ್ನೊಳಗೊಂಡಂತೆ ಅಯೋವರಾಜ್ಯ (1832)ರಲ್ಲಿ ರಚಿತವಾಯಿತು. (35) ವರ್ಷಗಳ ಮೊದಲೇ ಸಂಯುಕ್ತಸಂಸ್ಥಾನ ಸ್ವಾಧೀನಪಡಿಸಿಕೊಂಡ ಲ್ಯೂಸಿಯಾನದ ಬೃಹತ್ ಪ್ರದೇಶದ ಒಂದು ಭಾಗವಿದು. ಈ ಪ್ರಾಂತ್ಯದ ಅಯೋವ ಭಾಗವನ್ನು ಒಂದು ರಾಜ್ಯವನ್ನಾಗಿ ಮಾಡಿ ಸಂಯುಕ್ತಸಂಸ್ಥಾನದ ಅಂಗವಾಗಿ 1846ರಲ್ಲಿ ಸೇರಿಸಿಕೊಳ್ಳಲಾಯಿತು. ಸಂಯುಕ್ತಸಂಸ್ಥಾನದ ವಿಸ್ತಾರವಾಗಿರುವ ಮಧ್ಯಪ್ರದೇಶದ ಕೇಂದ್ರಭಾಗದಲ್ಲಿರುವ ಅಯೋವ ಮಿಸಿಸಿಪಿ ಮತ್ತು ಮಿಸ್ಸೌರಿ ನದಿಗಳ ಸಂಗಮಕ್ಕೆ ಅನತಿದೂರದಲ್ಲಿ 250 ಮೈಲಿಗಳವರೆಗಿನ ಹುಲ್ಲುಗಾವಲಿನ (ಪ್ರೈರಿ) ಪ್ರದೇಶವನ್ನು ಆವರಿಸಿಕೊಂಡಿದೆ. ಮೈದಾನದ ಮಧ್ಯಭಾಗ ಉತ್ತರಕ್ಕಿರುವುದರಿಂದ, ಈ ಪ್ರದೇಶ ಖಂಡಾಂತರ ವಾಯುಗುಣವನ್ನು ಪಡೆದಿದೆ. ಈ ಪ್ರಾಂತ್ಯ ಸ್ಥಾಪಿತವಾದ ಕೆಲವೇ ವರ್ಷಗಳಲ್ಲಿ ಅಭಿವೃದ್ಧಿಕಾರ್ಯ ಪ್ರಾರಂಭವಾಗಿ, ವಿಸ್ತರಣಾಕಾರ್ಯ ಮುಂದುವರಿದಿದೆ. ವ್ಯವಸಾಯವೇ ಮುಖ್ಯ ಕಸುಬಾಗಿದ್ದು, ರಾಜ್ಯದ ಆರ್ಥಿಕ ಉತ್ಪನ್ನದಲ್ಲಿ 2/3 ಭಾಗ ವ್ಯವಸಾಯದಿಂದಲೇ ಬರುವುದು. ಜೋಳ ಮುಖ್ಯ ಬೆಳೆ. ರಾಷ್ಟ್ರದ ಧಾನ್ಯದಲ್ಲಿ 1/6 ಭಾಗ ಇಲ್ಲಿ ದೊರೆಯುತ್ತದೆ ಕೋಳಿ, ದನಕರುಗಳ ಸಾಗಣೆ ಮುಖ್ಯವಾಗಿದೆ. ಹಾಲಿನ ಹಾಗೂ ಮಾಂಸದ ಉದ್ಯಮ ಬೆಳೆದಿದ್ದು ರಾಷ್ಟ್ರದ 1/4 ಭಾಗ ಹಂದಿಮಾಂಸ ಇಲ್ಲಿ ದೊರಕುತ್ತದೆ. ಅಲ್ಪವಾಗಿ ಕಲ್ಲಿದ್ದಲು, ಜಿಪ್ಸಮ್ ಮತ್ತು ಸುಣ್ಣಕಲ್ಲು ದೊರೆಯುತ್ತವೆ. ಆದುದರಿಂದ ಮಾಂಸ ಮತ್ತು ಧಾನ್ಯಗಳಂಥ ಆಹಾರಪದಾರ್ಥಗಳ ಕೈಗಾರಿಕೆಗಳೇ ಹೆಚ್ಚು. ಕೃಷಿ ಯಂತ್ರೋಪಕರಣಗಳು, ವಿಮಾನಭಾಗಗಳ ತಯಾರಿಕೆ, ಅಲ್ಯೂಮಿನಿಯಂ ಉತ್ಪಾದನೆ ಮುಂತಾದವು ಸಹಾಯಕ ಉದ್ಯಮಗಳಾಗಿವೆ. ಒಟ್ಟು ಜನಸಂಖ್ಯೆ 2,757,537 1960. ಶೇ. 50ರಷ್ಟು ಜನ ಡೆಮೊಯಿನ್ಸ್, ಸೀಡರ್ ರ್ಯಾಪಿಡ್ಸ್, ಡೆವನ್‍ಪೋರ್ಟ್, ಡುಬೂಕ್, ಕೌನ್ಸೆಲ್ ಬ್ಲಫ್ಸ್ ಮತ್ತು ಸೂ ನಗರಗಳಂಥ ಪಟ್ಟಣಗಳಲ್ಲಿ ವಾಸ ಮಾಡುತ್ತಾರೆ.	  

(ಸಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ